ಕೈಗಾರಿಕಾ ಅಲೇಖ್ಯ

	ಭೂರಿವಿತರಣೆಗಾಗಿ ಕಾರ್ಖಾನೆಗಳಲ್ಲಿ ಭಾರೀ ಗಾತ್ರದಲ್ಲಿ ಸಿದ್ಧಪಡಿಸುವ ವಸ್ತುಗಳ ಆಲೇಖ್ಯ (ಇಂಡಸ್ಟ್ರಿಯಲ್ ಡಿಸೈನ್), ಸಂಸ್ಕøತಿಯೊಡನೆ ಕೈಗಾರಿಕೆಯನ್ನು ಸಮನ್ವಯಗೊಳಿಸಲು, ಅದಿನ್ನೂ ಸಿದ್ಧಿಸದಿದ್ದರೂ, ಮಾನವ ನಡೆಸುತ್ತಿರುವ ಪ್ರಯತ್ನವಿದು.

ಚರಿತ್ರೆ : ಹಿಂದಿನ ಕಾಲದಲ್ಲಿ ಸ್ವತಃ ಕಲೆಗಾರನೂ ಆಗಿದ್ದ ಕಸಬುಗಾರ ತನ್ನ  ಪರಿಕರ್ಮದಲ್ಲಿ ಆಗಾಗ್ಗೆ ಮೂಡಿಬಂದ ನವೀನತೆಗಳನ್ನು ಉಪಯೋಗಿಸಿಕೊಂಡು ಆಲೇಖ್ಯ ರಚನೆ ಮಾಡುತ್ತಿದ್ದ. ಗೃಹೋಪಕರಣಗಳ ತಯಾರಿಕೆಯೆಲ್ಲ ಅವನದೇ ಆಗಿತ್ತು. ಅವನ ಉಪಕರಣಗಳು ಬಲು ಸರಳ. ಅವನ ಗಮನವೆಲ್ಲ ತಯಾರಿಸುತ್ತಿದ್ದ ಒಂದೇ ಪದಾರ್ಥದ ಮೇಲೆ ಕೇಂದ್ರೀಕೃತವಾಗಿರುತ್ತಿತ್ತು. ಅದಕ್ಕೆ ಒಪ್ಪ ನೀಡುವುದರಲ್ಲಿ ಅವನು ಶ್ರಮ, ಕಾಲ ಮುಂತಾದವನ್ನು ಲೆಕ್ಕಿಸುತ್ತಿರಲಿಲ್ಲ. ಹೀಗಾಗಿ ಸಹಜವಾಗಿಯೇ ಪದಾರ್ಥದ ಬೆಲೆ ಹೆಚ್ಚು ಆಗುತ್ತಿತ್ತು. ಆ ಉತ್ಪನ್ನ ಅವನ ವೈಯಕ್ತಿಕ ಕಲಾಭಿಜ್ಞತೆಯ ಪ್ರತಿಬಿಂಬ. ಆದರೆ ಕೈಗಾರಿಕಾ ಕ್ರಾಂತಿ, ತಡೆಯಲು ಅಸಾಧ್ಯವಾದ ಪ್ರವಾಹದಂತೆ, ತನ್ನ ವ್ಯಾಪ್ತಿಯಲ್ಲಿ ಎಲ್ಲವನ್ನೂ ಮುಳುಗಿಸಿದಾಗ ಯಂತ್ರಕ್ಕೆ ಈ ಕುಶಲ ಕಸಬುಗಾರನ ಉತ್ತರಾಧಿಕಾರ ಪ್ರಾಪ್ತವಾಯಿತು. ಆದರೆ ಅದರಿಂದ ಹೊರಬಂದ ಮಾಲಿನಲ್ಲಿ ಕಲಾಸ್ಪರ್ಶ ಅಥವಾ ಸ್ವಂತಿಕೆ ಎಂಬುದು ಉಳಿದಿರಲಿಲ್ಲ. ವಾಸ್ತವಿಕವಾಗಿ ಯಂತ್ರದ ಸಾಮಥ್ರ್ಯವನ್ನೂ ವ್ಯಕ್ತಿತ್ವವನ್ನೂ ಉತ್ಪಾದಕರು ಅರ್ಥಮಾಡಿಕೊಳ್ಳದಿದ್ದುದರಿಂದ ಈ ಪರಿಸ್ಥಿತಿ ತಲೆದೋರಿತು. ಕರಕೌಶಲವನ್ನು ಯಂತ್ರೋತ್ಪನ್ನಗಳಲ್ಲಿ ಅರಸುವುದು ಸರಿಯಲ್ಲ. ಉತ್ಪಾದಕರಿಗಿದ್ದ ಉದ್ದೇಶ ಒಂದೇ: ತುಟ್ಟಿಯ ಕರಕೌಶಲದಿಂದ ಹಿಂದೆ ತಯಾರಾಗುತ್ತಿದ್ದ ಅನೇಕ ಗೃಹೋಪಯೋಗಿ ಪದಾರ್ಥಗಳ ಸುಲಭ ಉತ್ಪಾದನೆ ಹಾಗೂ ಬಳಕೆಯನ್ನು ಹೆಚ್ಚಿಸುವುದು. ಆದ್ದರಿಂದ ಮೊದಮೊದಲಿನ ಯಂತ್ರೋತ್ಪಾದಿತ ಪದಾರ್ಥಗಳು ಸಹಜವಾಗಿಯೇ ತಮ್ಮ ಹಿಂದಿನ ಕರಕೌಶಲದ ಪದಾರ್ಥಗಳ ಅನುಕರಣೆಗಳಾಗಿದ್ದು, ಆ ಸಂಪ್ರದಾಯಗಳ ಮಿತಿಗೇ ಒಳಪಟ್ಟು, ಕುಶಲಕರ್ಮಿಗಿರುತ್ತಿದ್ದ ಸ್ಫೂರ್ತಿಯ ಅಭಾವದಿಂದ ಕೃತಕವಾಗಿರುತ್ತಿದ್ದವು. ಇತ್ತೀಚಿನವರೆಗೂ ನಡೆದು ಬಂದ ಈ ಹಳೆಯ ಶೈಲಿಯ ಅನುಕರಣೆ ವಾಸ್ತವವಾಗಿ ಯಂತ್ರಗಳ ಉದ್ದೇಶವಲ್ಲ. ಅಲ್ಲದೆ ಅಧಿಕ ಉತ್ಪಾದನೆಯೇ ಗುರಿಯಾದ ಅರ್ಥವ್ಯವಸ್ಥೆಯಲ್ಲಿ ಕಂದಾಚಾರದ ಶೈಲಿಗಳನ್ನೇ ಅನಂತವಾಗಿ ಅನುಕರಿಸಲೂ ಸಾಧ್ಯವಿಲ್ಲ. ಕುಶಲಕರ್ಮಿಯ ಅಳಿವಿನಿಂದ ಕೃತಕ ಶೈಲಿಗಳಿಂದಲೇ ಮಾರುಕಟ್ಟೆ ಮಿತಿಮೀರಿ ತುಂಬಿ ನವಯುಗವನ್ನು ಪ್ರತಿಬಿಂಬಿಸುವ ಹೊಸರೂಪಗಳೇ ಬಾರದಾದವು. ಇದರಿಂದ ಉದ್ಭವವಾದ ಬಳಕೆದಾರರ ತಿರಸ್ಕಾರಮನೋಭಾವವನ್ನು ಎದುರಿಸುವುದೇ ಉತ್ಪಾದಕರಿಗೆ ದೊಡ್ಡ ಸಮಸ್ಯೆಯಾಯಿತು. ಈ ನ್ಯೂನತೆಯನ್ನು ಸರಿಪಡಿಸಲು ಮಾಡಿದ ಮೊದಲ ಪ್ರಯತ್ನಗಳಲ್ಲಿ ಕಲೆಗಾರನ ಕೈವಾಡವಿಲ್ಲದ್ದರಿಂದ ಅವು ವಿಕೃತಿಗಳೇ ಆದವು.

ಕಾರ್ಖಾನೆಯ ಎಂಜಿನಿಯರುಗಳೂ ಮುಖ್ಯ ಕಾರ್ಯಗಾರರೂ ಈ ಅನ್ಯ ಸಂಪ್ರದಾಯವನ್ನು ತೊರೆದು ನಿರಾಡಂಬರವಾದ ಅಲಂಕಾರರಹಿತವಾದ ಹಾಗೂ ಯಂತ್ರಕ್ಕೆ ಸಹಜವಾದ ಸರಳಾಕೃತಿಗಳನ್ನು ರೂಪಿಸಲು ತೊಡಗಿದಾಗ ಸರಿಯಾದ ದಿಕ್ಕಿನಲ್ಲಿ ಮೊದಲು ಹೆಜ್ಜೆಯಿಟ್ಟರೆನ್ನಬಹುದು. ಆದರೂ ಕೊಳ್ಳುವ ಜನಕ್ಕೆ ಇವರು ಕಂಡ ಪರಿಹಾರ ಅಷ್ಟಾಗಿ ಹಿಡಿಸಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಈ ರೀತಿಯನ್ನು ವಿಡಂಬನೆ ಮಾಡುವ ಒಂದು ಚಳವಳಿಯೇ ಕಲಾಸಂಪ್ರದಾಯದಲ್ಲಿ ಸುಮಾರು 1900ರ ವೇಳೆಗೆ ಯೂರೋಪಿನಲ್ಲಿ ಪ್ರಾರಂಭವಾಗಿ ಅಂತರರಾಷ್ಟ್ರೀಯ ಸ್ವಭಾವವನ್ನೇ ತಾಳಿತು. ಅನಂತರ ಯಂತ್ರಯುಗದ ಪ್ರಭಾವ ಕಲೆಗಳ ಮೇಲೂ ಕಲೆಯ ಪ್ರಭಾವ ಯಂತ್ರದ ಮೇಲೂ ಬೀಳಲಾರಂಭಿಸಿ ಕೈಗಾರಿಕೆ ಹಾಗೂ ವರ್ತಮಾನ ಸಂಸ್ಕøತಿಗಳ ಸಮನ್ವಯಕಾರ್ಯ ಮೊದಲಾಯಿತು.  ಹೀಗಾಗಿ ಜನಸಮ್ಮತಿಯ ಹಿಂದಿನ ಮನಶ್ಯಾಸ್ತ್ರದ ಅರಿವೂ ತಯಾರಿಕೆಯ ತಂತ್ರ ವಿಧಾನಗಳ ಜ್ಞಾನವೂ ಉಳ್ಳವನ ಕೊರತೆ ಕಾಣತೊಡಗಿತು. ಯಂತ್ರ ಸರಳತೆಯನ್ನೊಳಗೊಂಡು ರೂಪಿತವಾದ ಕೊಳವೆಗಳ ಕುರ್ಚಿ ಈ ಕಾಲಕ್ಕೆ ಸಂಕೇತವೆನ್ನುವಂತೆ ಹೊರಬಂದಿತು.

ಆದರೂ ಕೇವಲ ಈಚೆಗೆ ಮಾತ್ರ ಯಂತ್ರದ ನಿಜವಾದ ಬೆಲೆಯ ಅರಿವಾಗಿ ಕೈಗಾರಿಕಾ ಆಲೇಖ್ಯಕಾರನೂ ಒಬ್ಬ ವಿಶೇಷಜ್ಞನೆಂದು ಅಂಗೀಕರಿಸಲ್ಪಟ್ಟಿದ್ದಾನೆ.  ಕೈಗಾರಿಕೆಯ ಸೇವೆಗೆ ನಿಯೋಜಿತವಾದ ಕಲೆಗಾರ ಅವನು. ಮೂಲತಃ ತನ್ನ ಕ್ರಿಯಾತ್ಮಕ ವಿಶೇಷ ಸಾಮಥ್ರ್ಯವನ್ನೂ ಮೂರು ಆಯಾಮಗಳ ಆಕಾರ ಜ್ಞಾನವನ್ನೂ ನವೀನಯಂತ್ರ ಕಲಾಶಾಸ್ತ್ರದೊಂದಿಗೆ ಸಂಯೋಜಿಸಿರುವ ಶಿಲ್ಪಿ ಅವನು. ಅವನ ಮುಖ್ಯ ಆಸಕ್ತಿ ಯಂತ್ರಗಳಿಂದ ರಾಶಿಯಾಗಿ ತಯಾರಾಗುವ ಪದಾರ್ಥಗಳ ದೃಗಂಶ. ಕಾರ್ಖಾನೆಯಲ್ಲಿ ತಯಾರಾಗುವ ಒಂದು ಪದಾರ್ಥದ ಉದ್ದೇಶ, ಮೂಲಸಾಮಗ್ರಿ, ಸಲಕರಣೆಗಳು ತಯಾರಿಕಾವಿಧಾನಗಳು ಮತ್ತು ಆರ್ಥಿಕ ನಿರ್ವಹಣ ಎಲ್ಲ ಕೂಡಿದಂತೆ ಒಟ್ಟು ಸಮಸ್ಯೆಯನ್ನು ಅವನು ತನ್ನ ರಸಾಭಿಜ್ಞತೆಯ ಮೌಲ್ಯಗಳಿಗೆ ಸರಿಹೊಂದಿಸುತ್ತಾನೆ. ಮಾರುಕಟ್ಟೆಯ ಜಗಲಿಯ ಮೇಲೆ ಅಥವಾ ಅಂಗಡಿಯ ಮಾರುಗೆಯ ಮೇಜದ ಮೇಲೆ ಮತ್ತು ಕಟ್ಟಕಡೆಗೆ ಮನೆಯಲ್ಲಿನ ತನ್ನ ಸ್ಥಾನದಲ್ಲಿ ಒಪ್ಪವಾಗಿ ಮೆರೆಯ ಬೇಕಾದ ಅಂತಿಮ ಪದಾರ್ಥವೇ ಸದಾ ಅವನ ಲಕ್ಷ್ಯದಲ್ಲಿರುತ್ತದೆ. ಹೀಗೆ ಉತ್ಪಾದಕನ, ಮಾರಿಗೆಯವನ ಮತ್ತು ಬಳಕೆದಾರನ ಮೂರು ವಿವಿಧ ದೃಷ್ಟಿಕೋನಗಳ ಜಾಣತನದ ಸಮನ್ವಯ ಅವನ ಕರ್ತವ್ಯವಾಗುತ್ತದೆ. ದಿನ ಬಳಕೆಯ ವಸ್ತುಗಳಲ್ಲಿ ಸಮಕಾಲೀನ ಕಲಾಭಿಜ್ಞತೆಯ ಅಭಿವ್ಯಕ್ತಿಯನ್ನು ತೋರಿಸುವುದೇ ಸಮಾಜಕ್ಕೆ ಅವನ ಮುಖ್ಯ ಕಾಣಿಕೆ.

ಯಂತ್ರಸಹಜವಾದ ಕಲೆಯಲ್ಲಿ ಮೇಲ್ಮೈಯ ಅಲಂಕರಣಕ್ಕೆ ಸ್ಥಾನವಿಲ್ಲ. ನಿಷ್ಕøಷ್ಟತೆ, ಸರಳತೆ, ಪ್ರತಿರೂಪ ತಯಾರಿಕೆಯ ಸೌಲಭ್ಯ ಇವು ಯಂತ್ರದ ಪ್ರಧಾನ ಲಕ್ಷಣಗಳು.  ವಾಸ್ತುಶಿಲ್ಪಕ್ಕೆ ಮೂರು ಪ್ರಮುಖ ಗುಣಗಳಿರಬೇಕೆಂದು ಹೇಳುತ್ತಾರೆ. ಪ್ರಯೋಜನ (ಉಪಯುಕ್ತತೆ) ಸತ್ತ್ವ, ಮತ್ತು ಸೌಂದರ್ಯ. ಮಾನವನ ಆವಶ್ಯಕತೆಗಳನ್ನು ಪೂರೈಸುವ ಯಾವ ಕಲಾವಿಭಾಗಕ್ಕಾಗಲಿ, ಹಾಗೆಯೇ ಕೈಗಾರಿಕಾ ರೂಪರಚನೆಗೆ ಸಹ, ಇವೇ ನಿರ್ದೇಶಕಗಳೆಂದು ಹೇಳಬಹುದು. ಕಲಾಲಕ್ಷಣಗಳು ಮೂರ್ತಿಶಿಲ್ಪ ಹಾಗೂ ಚಿತ್ರಕಲೆಗೇ ಮೀಸಲಾಗಿರದೆ ಮಾನವನಿರ್ಮಿತ ವಸ್ತು ಯಾವುದಕ್ಕೂ ಇರಬಹುದು. ಸರ್ವರಂಜಕವಾದ ಈ ಗುಣಗಳನ್ನು ಅಳವಡಿಸುವುದರಿಂದ ಯಾಂತ್ರಿಕ ದಕ್ಷತೆಯನ್ನೇನೂ ಕಳೆದುಕೊಳ್ಳಬೇಕಾಗಿಲ್ಲ ಎಂಬುದು ಉತ್ಪಾದಕರಿಗೆ ಮನದಟ್ಟಾಗಲು ಬಹಳ ಕಾಲವೇ ನಡೆಯಿತು. ರಚನಾಶಾಲೆಯಲ್ಲಿ ನಡೆಸಲಾದ ಪ್ರಯೋಗಗಳು ಯಂತ್ರನಿರ್ಮಿತ ಕೇವಲ ಪಾತಳಿಗಳಲ್ಲೂ ಅಮೂರ್ತ ಆಕೃತಿಗಳಲ್ಲೂ ಸೌಂದರ್ಯವನ್ನು ಕಾಣಬಹುದು ಎಂದೂ ಸೂಕ್ಷ್ಮಗ್ರಹಿಕೆಯಿಂದ ಆಕಾರ, ಬಣ್ಣ, ಹವಣು, ಐಕ್ಯ ಇವುಗಳ ಸಾಮರಸ್ಯವನ್ನು ಉತ್ಪಾದಿತ ಪದಾರ್ಥದಲ್ಲಿ ಸಾಧಿಸಬಹುದು ಎಂದೂ 1919-29ರ ಕಾಲದಲ್ಲಿ ಜರ್ಮನಿಯ ವಾಸ್ತುಶಿಲ್ಪಿ ವಾಲ್ಟರ್ ಗ್ರೋಪಿಯಸ್‍ನ ನೇತೃತ್ವದಲ್ಲಿ ಸ್ಥಾಪಿತವಾದ ಆಲೇಖ್ಯ ತೋರಿಸಿಕೊಟ್ಟವು.

ಮೇಲೆ ಹೇಳಿದಂತೆ ಆಲೇಖ್ಯ ರಚನೆಯಲ್ಲಿ ಪ್ರಧಾನ ಲಕ್ಷ್ಯ ಉಪಯುಕ್ತತೆ. ಪ್ರತಿ ಆಕಾರಕ್ಕೂ ಒಂದು ಉದ್ದೇಶವಿರಬೇಕು. ಮೂರ್ತಿಶಿಲ್ಪಕ್ಕೆ ಒಂದು ಉದ್ದೇಶವಿದ್ದರೆ ಕುಡಿಯುವ ಲೋಟಕ್ಕೂ ಒಂದು ಉದ್ದೇಶ ಅಗತ್ಯ. ಮನೆಯಲ್ಲಿ, ಕೆಲಸದಲ್ಲಿ, ಆಟದಲ್ಲಿ ಎಲ್ಲೆಲ್ಲೂ ಮಾನವನೇ ಮತ್ತು ಮಾನವಾಕೃತಿಯ ಅಳತೆ ಹಾಗೂ ಚಲನೆಗಳೇ ಇಲ್ಲಿ ಮುಖ್ಯ. ವಿಶ್ವಸೌಂದರ್ಯವನ್ನೇ ಸೂರೆಗೊಳ್ಳೂವಂತೆ ಒಂದು ಕುರ್ಚಿಯನ್ನು ತಯಾರುಮಾಡಿದ್ದರೂ ಒಬ್ಬ ಮಾನವ ಸುಖಾಸೀನನಾಗಿ ಭದ್ರವಾಗಿ ಅದರ ಮೇಲೆ ಕುಳಿತುಕೊಳ್ಳಲಾಗದಿದ್ದರೆ ಒಂದು ಕುರ್ಚಿಯಾಗಿ ಅದರ ರಚನೆ ವ್ಯರ್ಥವೇ. ಎರಡನೆಯ ಗುಣವಾದ ಸತ್ತ್ವವನ್ನು ಸ್ಥೂಲವಾಗಿ ಆಲೇಖ್ಯರಚನೆಯ ಕಾಲ, ಪದಾರ್ಥದ ಮೂಲ ಸಾಮಗ್ರಿಯ ಗುಣ, ಅದನ್ನು ಮಾಡುವಲ್ಲಿ ಉಪಯೋಗಿಸುವ ವಿಧಾನ ಇವುಗಳ ಬಗ್ಗೆ ತೋರಿಸಬೇಕಾದ ಒಂದು ಮಟ್ಟ ಎನ್ನಬಹುದು. ಪುರಾತನ ದೇವಾಲಯದ ಗೋಪುರ ಆ ಕಾಲದ ಸಂಸ್ಕøತಿಯ ಅಭಿವ್ಯಕ್ತಿ ಎನ್ನಬಹುದಾದರೂ ಇಂದಿನ ಒಂದು ವಿದ್ಯುತ್ ಅಗ್ಗಿಷ್ಟಿಕೆಗೆ ಕೂರ್ಮ ಪೀಠವನ್ನು ಜೋಡಿಸಿದರೆ ಅದು ಈ ಕಾಲದ ಜೀವನದ ರೀತಿಯ ಅಭಿವ್ಯಕ್ತಿ ಅನ್ನಿಸದು. ಹಾಗೆಯೇ ಕಬ್ಬಿಣದಿಂದಾದ ಪದಾರ್ಥವನ್ನು ಮರದಿಂದ ಆದದ್ದೇನೋ ಎಂದು ತೋರುವಂತೆ ಮಾಡುವುದು ಒಂದು ಸಾಹಸವಾಗಬಹುದಾದರೂ ಆಲೇಖ್ಯದ ಹಾಗೂ ಆರ್ಥಿಕ ದೃಷ್ಟಿಯಿಂದ ಅದು ಅಸಂಬದ್ಧ. ಆಯಾ ಪದಾರ್ಥದ ಅಂತರ್ಗತ ಲಕ್ಷಣಗಳಿಗೆ ಸಾಧ್ಯತೆಗಳಿಗೆ ಸರಿಯಾದ ಮನ್ನಣೆ ಇರಬೇಕು. ಅದೇ ರೀತಿ ಕೈ ಕಸಬಿನಲ್ಲಿ ಸಾಧ್ಯವಾಗುವ, ಅಲ್ಲಿ ಅದೇ ಒಂದು ಮಾನ್ಯಗುಣವಾಗುವ ವಿವರವಾದ ಅಲಂಕಾರಿಕ ಕೆತ್ತನೆಗಳು ಯಂತ್ರನಿರ್ಮಿತ ವಸ್ತುವಿನಲ್ಲಿ ಅವಾಸ್ತವ. ಮೂರನೆಯ ಗುಣವಾದ ಸೌಂದರ್ಯ ಸುಲಭವಾಗಿ ಹಿಡಿತಕ್ಕೆ ಸಿಗದ ಆದರೆ ಆಲೇಖ್ಯರಚನೆಯಲ್ಲಿ ಮುಖ್ಯವಾದ ಅಂಶ. ಇದಕ್ಕೆ ಸರ್ವಸಮ್ಮತವಾಗುವ ಲಕ್ಷಣ ನಿರೂಪಣೆ ಮಾಡಲಾಗದಿದ್ದರೂ ಸಾಮಾನ್ಯವಾಗಿ ಹೆಚ್ಚು ಜನಕ್ಕೆ ಪ್ರಿಯವಾಗಬಲ್ಲ ಗುಣಗಳನ್ನು, ಎಂದರೆ-ಭಾವ, ಬಂಧ, ಬಣ್ಣ ಗಾತ್ರದಲ್ಲಿ ಮಂದ ಹಾಗೂ ತೆಳುವಿನ ಹವಣು, ಒಂದು ತೆರನಾದ ಐಕ್ಯ ಇವನ್ನು ಒಳಗೊಂಡು ಸುಸಂಸ್ಕøತ ರುಚಿಗೆ ದ್ಯೋತಕವಾಗಿರುವುದು ಎನ್ನಬಹುದು. ಆಲೇಖ್ಯಕಾರನ ವಿಶಿಷ್ಟ ಸಾಮರ್ಥ ಬೇಕಾಗುವುದು ಇಲ್ಲಿಯೇ.

ಈವರೆಗಿನ ಬೆಳವಣಿಗೆಯಲ್ಲಿ ಕೈಗಾರಿಕಾ ಆಲೇಖ್ಯ ರಚನೆ ತನ್ನದೇ ಆದ ಸಂಪ್ರದಾಯವನ್ನೇನೂ ಹಾಕಿಕೊಂಡಿಲ್ಲದಿದ್ದರೂ ನಾಲ್ಕುಬಗೆಯ ಪ್ರವೃತಿಗಳನ್ನು ಇಲ್ಲಿ ಗುರುತಿಸಬಹುದು. ಮೊದಲನೆಯದು ಅವೈಯಕ್ತಿಕತೆ. ಕೈಗಾರಿಕೆಗೆ ಬೇಕಾದ ಆಲೇಖ್ಯರಚನೆ ಒಬ್ಬ ವ್ಯಕ್ತಿಯಿಂದಾಗಿರಲಿ, ಇಲ್ಲವೇ ಒಂದು ತಂಡದಿಂದಾಗಿರಲಿ ಅದರ ಅಭಿವ್ಯಕ್ತಿಯಲ್ಲಿ ಒಂದು ನಿಷ್ಪಕ್ಷಪಾತತೆ ಅಥವಾ ಅನಿರ್ದಿಷ್ಟತೆಯನ್ನು ಕಾಣಬಹುದು. ಇದು ಅಧಿಕಗಾತ್ರದ ಉತ್ಪನ್ನ ಹಾಗೂ ಮಾರಿಗೆಯ ಸಹಜ ಮುಖ ಎಂಬ ಪ್ರಶಂಸೆಯಿದ್ದರೂ ಇದರಲ್ಲಿ ವೈಯಕ್ತಿಕ ವೈಶಿಷ್ಟ್ಯಕ್ಕೆ ಅವಕಾಶವಿಲ್ಲ. ಆದ್ದರಿಂದ ಇದು ಯಂತ್ರಕ್ಕೆ ಶರಣಾಗತಿ. ಕರಕೌಶಲದ ಕೈವಾಡಕ್ಕೆ ಬಡಪ್ರತಿ ಎಂಬ ಟೀಕೆಯೂ ಇದೆ. ಎರಡನೆಯದಾಗಿ ಈ ಆಲೇಖ್ಯರಚನೆಯಲ್ಲಿ ಹೊರ ತೋರಿಕೆಯ ಸೊಗಸುಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಜಟಿಲವಾದ ಯಂತ್ರ ಸಂಬಂಧದ ಹಾಗೂ ವಿದ್ಯುನ್ಮಾನದ ಜೋಡಣೆಯ ವಿವರಗಳನ್ನೆಲ್ಲ ಅಲ್ಲಿ ಕೆಲಸಮಾಡುವ ಎಂಜಿನಿಯರುಗಳಿಗೇ ಬಿಟ್ಟುಬಿಡಲಾಗುತ್ತಿದೆ ಎಂಬ ಟೀಕೆ ಉಂಟು. ಹೊರಗಿನ ರೂಪ, ಒಳಗಿನ ರಚನೆ ಮತ್ತು ತಯಾರಿಕಾ ನಿರ್ವಹಣೆ ಇವು ಮೂರರ ಬೆಸುಗೆಯಂತಿರಬೇಕು ಆಲೇಖ್ಯರಚನೆ ಎಂಬುದು ಆದರ್ಶವಾದರೂ ಅದರ ಸಿದ್ಧಿ ಸ್ವಲ್ಪ ಕಠಿನವೇ. ಆದರೂ ಜಟಿಲ ರಚನೆಯ ಯಂತ್ರಗಳಿಗೆ ನಿರಪಾಯತೆ, ಸ್ವಚ್ಛತೆ ಹಾಗೂ ಓರಣಗಳ ದೃಷ್ಟಿಯಿಂದ ಚೊಕ್ಕವಾದ ಆವರಣವನ್ನು ನಿರ್ಮಿಸಬೇಕಾದದ್ದು ಅಗತ್ಯ. ಮೂರನೆಯದಾಗಿ ಧಾರಾಲೇಖೆಗೆ (ಸ್ಟ್ರೀಂ ಲೈನಿಂಗ್) ಇತ್ತಿರುವ ಹೆಚ್ಚಿನ ಪ್ರಾಶಸ್ತ್ಯ. ದ್ರವಮಾಧ್ಯಮದಲ್ಲಿ ದಕ್ಷತೆಯಿಂದ ವೇಗವಾಗಿ ಚಲಿಸಲು ಬೇಕಾದ ವಿಶಿಷ್ಟ ರೀತಿಯ ಡೊಂಕು ಮೇಲ್ಮೈಯ, ಭಾಗಭಾಗಕ್ಕೆ ಕ್ರಮೇಣ ಬದಲಾವಣೆಯಿರುವ ಮೀನಾಕಾರ ಇದು. ಸಂತತ ವೇಗಪ್ರಿಯವಾದ ಈ ಯುಗದಲ್ಲಿ ಈ ಆಕೃತಿ ಪ್ರಗತಿಯ ಸಂಕೇತವೇ ಆಗಿಬಿಟ್ಟಿದೆ. ಕೈಗಾರಿಕಾ ಆಲೇಖ್ಯ ರಚನೆಯಲ್ಲಿ ಈ ಗೀಳನ್ನು ಬಳಸಿಕೊಂಡು ವಾಸ್ತವವಾಗಿ ವೇಗಕ್ಕೆ ಏನೇನೂ ಸಂಬಂಧವಿರದ ಪದಾರ್ಥಗಳಿಗೆಲ್ಲ ಈ ಆಕಾರ ಕೊಡಲಾಗುತ್ತಿದೆ ಎಂಬ ಟೀಕೆ ಉಂಟು. ತರ್ಕಬದ್ಧತೆಗಿಂತ ಮಾನವಸಹಜ ದೌರ್ಬಲ್ಯವೇ ಇಲ್ಲಿ ಎದ್ದು ಕಾಣಿಸುತ್ತಿದೆ ಎನ್ನಬಹುದು. ನಾಲ್ಕನೆಯ ಪ್ರವೃತ್ತಿಯೆಂದರೆ ಲುಪ್ತತೆಯನ್ನು ಕೃತಕವಾಗಿ ತ್ವರಿತಗೊಳಿಸುವುದು. ಜಾಹಿರಾತಿನಿಂದ ರೂಪಿಸಲ್ಪಟ್ಟ ಸಾರ್ವಜನಿಕ ಅಭಿಪ್ರಾಯ ಬೆಲೆಗಳ ಬದಲಾವಣೆ, ಬಾಹ್ಯರೂಪದಲ್ಲಿ ಮತ್ತು ಉಪಯುಕ್ತತೆಯಲ್ಲಿ ಸಾಧಿಸಲಾದ ಮುನ್ನಡೆ ಇವುಗಳ ಮೂಲಕ ಒಮ್ಮೆ ಕೊಂಡ ಪದಾರ್ಥಗಳು ಸಹಜವಾಗಿ ಸವೆಯುವ ಮೊದಲೇ ಹಳತಾಗಿ ಕಾಣುವಂತೆ ಮಾಡಿ, ಬಳಕೆದಾರ ಹೊಸ ಪದಾರ್ಥಗಳನ್ನು ಕೊಳ್ಳುವಂತೆ ಪ್ರಲೋಭಿಸುವ ಆಲೇಖ್ಯರಚನೆ. ಅದರಲ್ಲೂ ಮೋಟಾರು ಕಾರುಗಳು ಮತ್ತು ಅನೇಕ ಗೃಹಪರಿಕರಗಳ ವಿಷಯದಲ್ಲಿ ಉಂಟಾಗಿಸಿರುವ ಈ ಚಪಲ ಪ್ರವೃತ್ತಿ ಎಷ್ಟೋ ಕಡೆ ಉದ್ರೇಕಪರವಾದ ಹಾಗೂ ತರ್ಕಬದ್ಧ ಪ್ರತಿಕ್ರಿಯೆಗೆ ಎಡೆಕೊಟ್ಟಿದ್ದರೂ ಅದರ ಆರ್ಥಿಕ ಪರಿಣಾಮಕ್ಕಾಗಿ ಉಪಯೋಗದಲ್ಲಿದೆ.

ಒಟ್ಟಿನಲ್ಲಿ ಕೈಗಾರಿಕಾ ಆಲೇಖ್ಯರಚನೆ ಪ್ರಪಂಚದ ಅರ್ಥ ವ್ಯವಸ್ಥೆ, ಖಾಸಗಿ ಪ್ರಭಾವ ಮತ್ತು ಅನುಭೋಗ, ಕಲೆಗಳು, ಯಂತ್ರಶಾಸ್ತ್ರ, ಶಿಕ್ಷಣ ಇವೆಲ್ಲವುಗಳಿಂದ ಪ್ರಭಾವಿತವಾಗಿ ಹಾಗೂ ಅವುಗಳ ಮೇಲೆ ತನ್ನ ಪ್ರಭಾವ ಬೀರಿ ವರ್ಧಿಸುತ್ತಿರುವ ಪ್ರಬಲಶಕ್ತಿಯಾಗಿದೆ. ಕಲೆಯ ಸಿದ್ಧಿಗಿಂತಲೂ ಆರ್ಥಿಕ ಚಟುವಟಿಕೆಗೆ ಅದರಿಂದ ಪ್ರಚೋದನೆ ದೊರೆತಿದೆ. ದೊಡ್ಡ ಕೈಗಾರಿಕಾ ವ್ಯವಸ್ಥೆಗಳಲ್ಲಿ ಆಲೇಖ್ಯರಚನೆಗಾಗಿಯೇ ಮೀಸಲಾದ ಇಲಾಖೆಗಳು, ಕಾರ್ಯಶಾಲೆಗಳು ಆವಶ್ಯಕ ವಿಭಾಗಗಳಾಗಿವೆ.  ಸಣ್ಣವುಗಳಲ್ಲಿ ಆಲೇಖ್ಯರಚನೆಗಾಗಿ ಸ್ವಂತ ಸಿಬ್ಬಂದಿಯಿರುತ್ತದೆ. ಅಥವಾ ಸ್ವತಂತ್ರವಾದ ವೃತ್ತಿಗಾರರಿಂದ ಅಂಥ ವ್ಯವಸ್ಥೆಗಳು ಸಲಹೆ ಪಡೆಯುತ್ತವೆ. ವೃತ್ತಿ ಹೊಸದಾದರೂ ಮುಂದುವರಿದ ರಾಷ್ಟ್ರಗಳಲ್ಲಿ ತಮ್ಮದೇ ಆದ ನಿಯಮ, ನಿಬಂಧನೆಗಳನ್ನು ಶಿಕ್ಷಣ ಮಟ್ಟಗಳನ್ನು ರೂಪಿಸಿಕೊಂಡು ಊರ್ಜಿತವಾಗಿರುವ ವೃತ್ತಿ ಸಂಸ್ಥೆಗಳು ಮನ್ನಣೆಯನ್ನು ಪಡೆದಿವೆ.         
                                                           (ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ